ಜರತಾರಿ ಕೆಲಸ -
ಪ್ರಮುಖವಾಗಿ ಎಳೆಗಳನ್ನು ವಿವಿಧ ನಮೂನೆಗಳಲ್ಲಿ ಹೆಣೆದುಕೊಂಡು ನಯನಮನೋಹರವಾದ ವಸ್ತ್ರಗಳನ್ನು ತಯಾರಿಸುವ ಕೆಲಸ. ಕೈಮಗ್ಗದ ಕೆಲಸಗಳಲ್ಲಿ ನಿಷ್ಣಾತರಾಗಿದ್ದ ಹಾಗೂ ಶ್ರೀಮಂತ ಸಂಸ್ಕøತಿಯನ್ನು ಹೊಂದಿದ್ದ ಪ್ರಾಚೀನ ಜನಾಂಗಗಳು ಜರತಾರಿ ಕೆಲಸಕ್ಕೆ ಸಂಬಂಧಿಸಿದಂತೆ ಅನೇಕ ಮಾದರಿಯ ವಸ್ತ್ರಗಳನ್ನು ತಯಾರಿಸಿದ್ದ ಬಗ್ಗೆ ಉಲ್ಲೇಖಗಳು ದೊರೆಯುತ್ತವೆ. ಇಂಥ ಎಳೆಗಳನ್ನು ಉಪಯೋಗಿಸಿ ಮೊದಲಿಗೆ ಪರ್ಷಿಯನ್ನರು ವೈಭವೊಂಪೇತ ರತ್ನಗಂಬಳಿಗಳನ್ನು ತಯಾರಿಸುತ್ತಿದ್ದರು. ಪ್ರಾಚೀನ ಭಾರತೀಯರು ಜರತಾರಿ ಕೆಲಸದಲ್ಲಿ ಎಷ್ಟರಮಟ್ಟಿಗೆ ಸಿದ್ಧಹಸ್ತರಾಗಿದ್ದರು ಎಂಬುದರ ಬಗ್ಗೆ ಭಾರತೀಯ ಪುರಾಣಗಳಲ್ಲಿ ಕಂಡುಬರುವ ರಾಜಮಹಾರಾಜರುಗಳ ವೇಷಭೂಷಣಗಳ ವರ್ಣನೆಗಳೇ ಸಾಕು.

ಜರತಾರಿ ಕೆಲಸವನ್ನು ಸಾಮಾನ್ಯವಾಗಿ ಕಲಾಬತಿನ ಕೆಲಸವೆಂತಲೂ ಕರೆಯುವುದಿದೆ. ಜರಿಯೇ ಮುಂತಾದ ಸಿಂಗಾರ ಪಟ್ಟಿಕೆಗಳನ್ನು ವಸ್ತ್ರನೇಯುವಾಗಲೇ ಅಳವಡಿಸಿಕೊಂಡು ಅಲಂಕಾರಕ್ಕಾಗಿ ಮಾಡುವ ದಾರದ ಚಿತ್ರಕೆಲಸ ಕಸೂತಿಯಲ್ಲಿ ಮತ್ತು ಚಿನ್ನ ಮತ್ತು ಬೆಳ್ಳಿಯ ಎಳೆಗಳನ್ನು ಅಡ್ಡೆಳೆಗಳಾಗಿ ಉಪಯೋಗಿಸಿ ಭಾರವೂ ಅಮೂಲ್ಯವೂ ಆದ ವಿಶಿಷ್ಟ ಬಗೆಯ ಬಟ್ಟೆ ಕಿನ್‍ಕಾಪನ್ನು ತಯಾರಿಸುವುದರಲ್ಲಿ ಜರತಾರಿಯ ಮಹತ್ತ್ವ ಎದ್ದು ಕಾಣುತ್ತದೆ. ಸಾಮಾನ್ಯವಾಗಿ ಜರತಾರಿ ಎಳೆಯ ಒಳ ಎಳೆ ಲಿನನ್ನಿನಿಂದಾಗಿರುತ್ತದೆ. ಈ ಒಳ ಎಳೆಯ ಮೇಲೆ ಶುದ್ಧ ಚಿನ್ನದ ಹೊದಿಕೆ ಇರುತ್ತದೆ. ಮಧ್ಯಯುಗದಲ್ಲಿ ಚಿನ್ನವನ್ನು ಮೊದಲು ತೆಳುಹಾಳೆಯಾಗಿ ತಟ್ಟಿಕೊಂಡು ಅನಂತರ ಅದನ್ನು ಕಿರಯಗಲದ ಎಳೆಗಳ ರೂಪದಲ್ಲಿ ಕತ್ತರಿಸಲಾಗುತ್ತಿತ್ತು. ರೇಷ್ಮೆ ಇಲ್ಲವೆ ಲಿನನ್ನಿನ ಒಳ ಎಳೆಯ ಮೇಲೆ ಈ ಚಿನ್ನದ ಎಳೆಗಳನ್ನು ಹೊದಿಸಲಾಗುತ್ತಿತ್ತು. ಈಚಿನ ವರ್ಷಗಳಲ್ಲಿ ಶುದ್ಧ ರೇಷ್ಮೆ ಇಲ್ಲವೆ ವಿಸ್ಕೋಸ್ ರೇಯಾನನ್ನು ಒಳ ಎಳೆಯಾಗಿ ಉಪಯೋಗಿಸಿಕೊಂಡು ಬೆಳ್ಳಿ ಅಥವಾ ಬೆಳ್ಳಿಲೇಪಿತ ತಾಮ್ರದ ತಂತಿಯನ್ನು ಬಣ್ಣಗಚ್ಚಾಗಿಯೂ ಬಳಸಿಕೊಂಡು ಚಿನ್ನದ ಎಳೆಗಳನ್ನು ತಯಾರಿಸಲಾಗುತ್ತಿದೆ. ಸೂಕ್ತವ್ಯಾಸದ ಲೋಹದ ತಂತಿಯನ್ನು ಮೊದಲು ತಯಾರಿಸಿಕೊಂಡು ಅನಂತರ ಅದನ್ನು ಅಧಿಕ ಹೊಳಪುಳ್ಳ ಸ್ಟೇನ್‍ಲೆಸ್ ಉಕ್ಕಿನ ಉರುಳೆಗಳ ನಡುವೆ ಹಾಯಿಸಿ ಚಪ್ಪಟೆ ಎಳೆಗಳನ್ನು (ಲ್ಯಾಮೆಟ) ಮಾಡುತ್ತಾರೆ. ಕೆಂಪು ಅಥವಾ ಕಿತ್ತಲೆ ಬಣ್ಣ ಕೊಟ್ಟಿರುವ ಶುದ್ಧ ರೇಷ್ಮೆಯ ಇಲ್ಲವೆ ವಿಸ್ಕೊಸ್ ರೇಯಾನಿನ ಒಳ ಎಳೆಯ ಮೇಲೆ ಇದನ್ನು ಸುತ್ತಲಾಗುತ್ತದೆ.

ಚಿನ್ನದ ಇಲ್ಲವೆ ಬೆಳ್ಳಿಯ ಎಳೆಗಳಲ್ಲಿ ಮೂರು ಬಗೆಗಳುಂಟು.

1 ಶುದ್ಧ ರೇಷ್ಮೆ ಒಳ ಎಳೆಯನ್ನು ಹೊಂದಿರುವ ಶುದ್ಧ ಚಿನ್ನದ ಇಲ್ಲವೇ ಚಿನ್ನದ ಲೇಪವನ್ನು ಹೊಂದಿರುವ ಬೆಳ್ಳಿಯ ಎಳೆ.

2 ರೇಷ್ಮೆಯ ಒಳ ಎಳೆಯ ಮೇಲೆ ಬೆಳ್ಳಿಲೇಪಿತ ತಾಮ್ರದ ಹೊದಿಕೆ. ಈ ಹೊದಿಕೆಗೆ ಚಿನ್ನದ ಲೇಪ ನೀಡಲಾಗಿರುತ್ತದೆ. ಇದು ಅರೆಶುದ್ಧ ಚಿನ್ನದ ಎಳೆ.

3 ನಕಲಿ ಚಿನ್ನದ ಎಳೆ (ಪುಡಿ ಗುಣಮಟ್ಟಿದ್ದು). ಇದರಲ್ಲಿ ರೇಯಾನಿನ ಒಳಎಳೆ ಇರುತ್ತದೆ. ಅದರ ಮೇಲೆ ಬೆಳ್ಳಿಯನ್ನು ಲೇಪನ ಮಾಡಿರುವ ತಾಮ್ರದ ಹೊದಿಕೆ ಉಂಟು. ಈ ಹೊದಿಕೆಯ ಮೇಲೆ ರಾಳದ ಲೇಪನವಿರುತ್ತದೆ. ಇದೇ ಅತ್ಯಂತ ಕಡಿಮೆ ಬೆಲೆಯ ಚಿನ್ನದ ಎಳೆ.

ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಇನ್ನಿತರ ರಾಷ್ಟ್ರಗಳಲ್ಲೂ ಹಬ್ಬ-ಹರಿದಿನಗಳ ಸಂದರ್ಭಗಳಲ್ಲಿ ಶ್ರೀಮಂತರಾದಿಯಾಗಿ ಎಲ್ಲರೂ ಅವರವರ ಯೋಗ್ಯತೆಗೆ ತಕ್ಕಂತೆ ಚಿನ್ನಬೆಳ್ಳಿಯ ಕಲಾಬತ್ತಿನ ಬಣ್ಣಬಣ್ಣದ ಉಡುಗೆಗಳನ್ನು ಉಡುತ್ತಾರೆ. ಧರ್ಮಾವರಂ ಮತ್ತು ಕಾಂಜೀವರಂಗಳಲ್ಲಿ ಶುದ್ಧ ರೇಷ್ಮೆ ಸೀರೆಗಳ ಅಂಚು ಮತ್ತು ಸೆರಗನ್ನು ಚಿನ್ನದ ಕಲಾಬತ್ತು ಅಥವಾ ಎಳೆಗಳನ್ನು ಬಳಸಿ ನೇಯುತ್ತಾರೆ. ಚೌಕಳಿ ಮಾದರಿಯ ಸೀರೆ ಹಾಗೂ ಒಡಲಿನಲ್ಲೆಲ್ಲ ಚಿತ್ತಾರಗಳನ್ನು ಹೊಂದಿರುವ ಬುಟ್ಟಾ ಸೀರೆಗಳನ್ನೂ ನೇಯುವುದೂ ಉಂಟು. ಸುಪ್ರಸಿದ್ಧ ಮೈಸೂರು ಪೇಟವನ್ನು ನೇಯುವಾಗ ಹಾಸು ಉತ್ತಮ ನೂಲನ್ನೂ ಪಟ್ಟಯಂತೆ ಬರುವ ಹೊಕ್ಕು ಎಳೆಯ ಜಾಗದಲ್ಲಿ ಚಿನ್ನದ ಎಳೆಯನ್ನೂ ಬಳಸುತ್ತಾರೆ. ಜರತಾರಿ ವಸ್ತ್ರಗಳಲ್ಲಿ ವಾರಾಣಸಿಯ ಮತ್ತು ಅಹಮದಾಬಾದಿನ ಕಿನ್‍ಕಾಪು ವಸ್ತ್ರಗಳೂ ಸೇರುವೆ. ರೇಷ್ಮೆ, ಚಿನ್ನ ಮತ್ತು ಬೆಳ್ಳಿಯ ಎಳೆಗಳನ್ನು ಬಳಸಿ ಇವುಗಳನ್ನು ನೇಯಲಾಗುತ್ತದೆ. ಟಿಷ್ಯು ಅಥವಾ ನವುರು ಸೀರೆಗಳಲ್ಲಿ ಬಣ್ಣದ ರೇಷ್ಮೆ ಎಳೆಯನ್ನು ಹಾಸಾಗಿಯೂ ಚಿನ್ನದ ಎಳೆಯನ್ನು ಹೊಕ್ಕಾಗಿಯೂ ಬಳಸುತ್ತಾರೆ. ಭಾರತದಲ್ಲಿನ ಕೈಮಗ್ಗದ ಕೇಂದ್ರಗಳಲ್ಲಿ ಇಂಥ ಜರತಾರಿ ವಸ್ತ್ರಗಳ ಮತ್ತೊಂದು ಕ್ಷೇತ್ರವೆಂದರೆ ಕಸೂತಿಯದು. ಭಾರತದ ಕಾಶ್ಮೀರ, ರಾಜಸ್ಥಾನ, ಗುಜರಾತ್ ಮುಂತಾದ ಕಡೆಗಳಲ್ಲಿರುವ ಮಹಿಳೆಯರು ಪರಂಪರಾನುಗತವಾಗಿ ಈ ಕೆಲಸದಲ್ಲಿ ತೊಡಗಿದ್ದಾರೆ.

ಜಗತ್ತಿನ ಬಹುತೇಕ ಪ್ರಸಿದ್ಧ ವಸ್ತುಸಂಗ್ರಹಾಲಯಗಳಲ್ಲಿ ಬಣ್ಣದ ನೂಲು, ಚಿನ್ನದ ಹಾಗೂ ಬೆಳ್ಳಿಯ ಕಲಾಬತ್ತನ್ನು ಬಳಸಿ ಅದ್ಭುತವಾಗಿ ನೆಯ್ದಿರುವ ಆಧುನಿಕ ಹಾಗೂ ಸಾಂಪ್ರದಾಯಿಕ ವಸ್ತ್ರಗಳ ಸುಂದರ ಸಂಗ್ರಹ ಕಾಣಬರುತ್ತದೆ.
	(ನೋಡಿ- ಕಲಾಬತು)
	(ನೋಡಿ- ಕಸೂತಿ)
        (ನೋಡಿ- ಕಿನ್‍ಕಾಪು)								(ವಿ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ